Tuesday 29 November 2016

ಕೇಳು ಸಂಸಾರದಲ್ಲಿ ರಾಜಕೀಯ

ಚಿತ್ರ: ಮಾತೃದೇವೋಭವ. ಸಂಗೀತ: ಹಂಸಲೇಖ.
ಗಾಯಕ: ಸಿ. ಅಶ್ವತ್ಥ್.
ರಚನೆ: ಸು. ರುದ್ರಮೂರ್ತಿ ಶಾಸ್ತ್ರಿ

ಕೇಳು ಸಂಸಾರದಲ್ಲಿ ರಾಜಕೀಯ
ತಾನು ತನ್ನ ಮನೆಯಲ್ಲೆ ಪರಕೀಯ
ಇಲ್ಲಿ ಅತ್ತಿಯ ಹಣ್ಣು ಬಿಚ್ಚಿ ನೋಡಿದರೆ
ಬರಿ ಹುಳುಕು ತುಂಬಿಹುದು ಕೇಳೊ ದೊರೆ ||ಪಲ್ಲವಿ||

ಎಲ್ಲರು ಒಟ್ಟಿಗೆ ಓಟನು ನೀಡಿ, ಕೊಡುವರು ನಾಯಕ ಪಟ್ಟ
ನಂತರ ಅವನನೆ ಕಿತ್ತು ತಿನ್ನುತ, ಹಿಡಿವರು ಆತನ ಜುಟ್ಟ;
ನಾನೊಂದು ಲೆಕ್ಕದ ಬುಕ್ಕು, ನೂರೆಂಟು ವೆಚ್ಚದ ಚೆಕ್ಕು
ಸೋಮಾರಿ ಮಕ್ಕಳ ‘ಕುಕ್ಕು’, ನನಗೀಗ ದೇವರೆ ದಿಕ್ಕು

ಮಮತೆಯ ತುಂಬಿದ ನೀರು ಉಣಿಸಿದೆ, ಬೆಳಸಿದೆ ಹೂವಿನ ತೋಟ
ಅರಳಿದ ಸುಂದರ ಹೂವುಗಳೆಲ್ಲ, ಗಾಳಿಗೆ ತೂಗುವ ಆಟ;
ನೋಡುತಾ ಸಂತಸಗೊಂಡೆ, ಜೀವನವು ಸಾರ್ಥಕವೆಂದೆ
ಹೂವುಗಳೆ ಮುಳ್ಳುಗಳಾಗಿ, ಚುಚ್ಚಿದರೆ ನೋವನು ತಿಂದೆ
ಬಾಳು ಮೆತ್ತನೆ ಹುತ್ತದಂತೆ ಅಲ್ಲವೇನು
ಅಲ್ಲಿ ಮುಟ್ಟಲು ಹಾವು ಕಚ್ಚಿ ನೊಂದೆ ನೀನು

ಹಾಸಿಗೆಯನ್ನು ಪಡೆದವರೆಲ್ಲರು, ಕೊಟ್ಟರು ಮುಳ್ಳಿನ ಚಾಪೆ
ಮಕ್ಕಳ ಪಡೆದ ಒಂದೇ ತಪ್ಪಿಗೆ, ಜೀವನ ಚಿಂದಿಯ ತೇಪೆ;
ಭಾಷಣವ ಮಾಡುವರೆಲ್ಲ, ನನಗಂತು ಬಾಯೇ ಇಲ್ಲ
ಅದರೂ ನಾ ಯಜಮಾನ, ಹೇಗಿದೆ ನನ್ನಯ ಮಾನ

ಚಿನ್ನದ ಸೂಜಿಯು ಕಣ್ಣು ಚುಚ್ಚಿತು, ಚಿಮ್ಮಿತು ನೆತ್ತರ ನೀರು
ಮೆತ್ತನೆ ಕತ್ತಿಯು ಎದೆಯ ಇರಿದರೆ, ನೋವನು ಅಳೆಯುವರಾರು?
ಅಕ್ಕರೆಯ ಸಕ್ಕರೆ ತುಂಬಿ, ಮಕ್ಕಳನು ಸಾಕಿದೆ ನಂಬಿ
ಸಿಹಿಯೆಲ್ಲ ಕಹಿಯಾದಾಗ, ಬಾಳೊಂದು ದುಃಖದ ರಾಗ!
ಅಂದು ಮುತ್ತಿನ ಮಾತುಗಳ ಹೇಳಿದರು
ಇಂದು ಮಾತಿನ ಈಟಿಯಿಂದ ಮೀಟಿದರು

@ಮಹೇಂದ್ರ ಆರ್ ಪಾಟೀಲ

No comments:

Post a Comment